ಡೆಮೀಟರ್
ಪ್ರಾಚೀನ ಗ್ರೀಸ್ ದೇಶದ ಹನ್ನೆರಡು ಮುಖ್ಯದೇವತೆಗಳಲ್ಲಿ ಒಬ್ಬಳಾದ ಮಾತೃದೇವತೆ; ಪ್ರಕೃತಿಯ ಪುಷ್ಟಿಕಾರಿಣಿಯೂ ಸೃಷ್ಟಿಕಾರಿಣಿಯೂ ಆದ ಅಂಶದ ಅಭಿಮಾನಿ ದೇವತೆ. ರೋಮನರಲ್ಲೂ ಈಕೆಯ ಪೂಜೆ ಬಳಕೆಯಲ್ಲಿತ್ತು. ಗ್ರೀಕ್ ಪುರಾಣಕತೆಗಳಲ್ಲಿ ಇವಳನ್ನು ಕೃಷಿದೇವತೆಯೆಂದು ವರ್ಣಿಸಲಾಗಿದೆ. ಈ ದೇವತೆಯ ರೋಮನ್ ಪ್ರತಿರೂಪವೇ ಸೆರೆಸ್. ಈಕೆ ಕ್ರೋನಸ್ ಮತ್ತು ರ್ಹೀ ಎಂಬ ತಂದೆ ತಾಯಿಗಳ ಮಗಳು. ಜû್ಯೂಸ್ ದೇವತೆಯಿಂದ ಈಕೆ ಪರ್ಸಿಫೋನ್ ಎಂಬ ಮಗಳನ್ನು ಪಡೆದಳು. ಸಿಸಿಲಿ ದ್ವೀಪದ ಎನ್ನಾ ಎಂಬ ರಮ್ಯ ವನಪ್ರದೇಶದಲ್ಲಿ ಪುಷ್ಪಾಪಚಯ ಮಾಡುತ್ತಿದ್ದಾಗ ಪಸೀಫೋನಳನ್ನು ಪಾತಾಳದ ಅರಸನಾದ ಪ್ಲೂಟೊ ಬಲಾತ್ಕಾರದಿಂದ ಒಯ್ದ. ಸೂರ್ಯ ದೇವನಾದ ಹೀಲಿಯೋಸ್‍ನಿಂದ ಸಂಗತಿ ತಿಳಿದು ಡೆಮೀಟರ್ ಮಗಳ ಶೋಧಕ್ಕೆ ಹೊರಟಳು. ಜ್ಯೂಸ್ ಇವಳ ಸಹಾಯಕ್ಕೆ ಬರಲಿಲ್ಲವೆಂಬ ಕಾರಣದಿಂದ ಕುಪಿತೆಯಾದ ಡೆಮೀಟರ್ ತನ್ನ ಮಗಳು ತನ್ನ ಬಳಿಗೆ ಬರುವವರೆಗೆ ಭೂಮಿ ಬೆಳೆಯಿಲ್ಲದೆ ಬಂಜರಾಗಲಿ ಎಂದು ಶಪಿಸಿದಳು. ಕೊನೆಗೆ ಒಂದು ಕರಾರಿನ ಮೇಲೆ ಹೇಡ್ಸ್ ಅಥವಾ ಪಾತಾಳದಿಂದ ಪರ್ಸಿಫೋನಳನ್ನು ತಿರುಗಿ ಕರೆದುಕೊಂಡು ಬರಲು ಜû್ಯೂಸ್ ಒಪ್ಪುವಂತಾಯಿತು. ತನ್ನ ಪಾತಾಳವಾಸದ ಅವಧಿಯಲ್ಲಿ ಪರ್ಸಿಫೋನ್ ನಿರಾಹಾರಳಾಗಿ ಉಪವಾಸಮಾಡಿದ್ದರೆ ಮಾತ್ರ ಎಂಬುದೇ ಆ ಕರಾರು. ಆದರೆ ಪಾತಾಳದ ಇಲಿಷನ್ ವನಾಂತಗಳಲ್ಲಿ ಬೆಳೆಯುವ ದಾಳಿಂಬೆಯ ಹಣ್ಣಿನ ಒಂದು ಮಣಿಯನ್ನು-ಕೆಲವು ಕಥಾಭೇದಗಳಂತೆ ಆರು ಮಣಿಗಳನ್ನು-ಅಷ್ಟು ಹೊತ್ತಿಗೆ ಆಕೆ ತಿಂದಾಗಿತ್ತು. ಆದ್ದರಿಂದ ಪರ್ಸಿಫೋನ್ ತಾಯಿಯ ಜೊತೆಗೆ ವರ್ಷದಲ್ಲಿ ಆರುತಿಂಗಳ ಕಾಲವೂ ಪ್ಲೂಟೋನ ಜೊತೆಗೆ ಆರು ತಿಂಗಳ ಕಾಲವೂ ಇರುವಂತಾಯಿತು.

	ಈ ಕಥೆ ಕೃಷಿಕರ್ಮವನ್ನು ಪ್ರತೀಕಚ್ಛಾಯೆಯಿಂದ ವರ್ಣಿಸುವ ಒಂದು ವಿಧಾನವಾಗಿದೆ. ಪಾತಾಳದಲ್ಲಿ ಆರು ತಿಂಗಳು ವಾಸಿಸುವುದು ಎಂಬುದು ನೆಲದ ಮೇಲೆ ಬಿತ್ತಿದ ಬೀಜ ವರ್ಷದಲ್ಲಿ ಎಷ್ಟೋ ಕಾಲ ನೆಲದೊಳಗೆ ಗುಪ್ತವಾಗಿರುವ ಕಾಲದ ಪ್ರತೀಕ. ತಾಯಿಯ ಬಳಿಗೆ ಬರುವುದು ಎಂಬುದು ಪೈರಿನ ಬೆಳೆಯ ತೆನೆಗಳ ಸ್ವರೂಪವನ್ನು ಪ್ರತಿನಿಧಿಸುವ ಕಾಲದ ಪ್ರತೀಕ. ಡೆಮೀಟರ್ ದೇವತೆಯ ಉತ್ಸವಕಾಲಗಳು, ಇಲ್ಯೂಸಿನಿಯ ಇತ್ಯಾದಿ, ಬೆಳೆಯ ತೆನೆಗಳು ಇರುವ ಕಾಲದಲ್ಲೇ ಬರುತ್ತವೆ. ಆದರೆ ಈ ಉತ್ಸವಾಚರಣೆಗೆ ಸಂಬಂಧಿಸಿದ ವಿಧಿಗಳು ಮಾತ್ರ ಅತ್ಯಂತ ಗುಪ್ತವಾಗಿಯೇ ಇಡಲ್ಪಟ್ಟಿದ್ದವು.

	ಹೆಸಿಯಡ್ ಹೇಳುವ ಪ್ರಕಾರ ಮದ್ಯದೇವತೆಯಾದ ಡೈಯನೈಸನ್ (ನೋಡಿ- ಡೈಯನೈಸಸ್) ಅಥವಾ ಬ್ಯಾಕ್ಕಸ್‍ನಿಗೂ ಡೆಮೀಟರ್ ದೇವತೆಯೇ ತಾಯಿ.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ